ಗ್ರಂಥ - 31:ಭಕ್ತ ಭಾವಧಾರೆ -೩ (ಶ್ರೀರಂಗ ಮಹಾಗುರುವಿಗೆ ಶಿಷ್ಯರ ಭಾವ ಕುಸುಮಾಂಜಲಿ) (Bhakta Bhaavadhaare - 3: Compilation)
ಪುಸ್ತಕ ಪರಿಚಯ (Book Introduction) :
ಪ್ರಕಾಶಕರು : ಅಷ್ಟಾಂಗಯೋಗ ವಿಜ್ಞಾನ ಮಂದಿರ, ಬೆಂಗಳೂರು
ಶ್ರೀರಂಗ ಗುರುಭಗವಂತರ ಜಯಂತ್ಯುತ್ಸವವು ನೂರನೇ ವರ್ಷಕ್ಕೆ (2010) ಪದಾರ್ಪಣೆ ಮಾಡುತ್ತಿರುವ ಚಿರಸ್ಮರಣೀಯ ಸಂದರ್ಭದಲ್ಲಿ ಆ ಮಹಾಪುರುಷನ ಮಧುರ ಸ್ಮರಣೆಗಳನ್ನು ಹೊತ್ತು ಭಕ್ತ ಭಾವಧಾರೆ-೩ ಪ್ರಕಾಶಿತವಾಗಿದೆ.
ಶ್ರೀಗುರುವಿನ ಸಾನ್ನಿಧ್ಯ-ಸಾಮರ್ಥ್ಯಗಳು ಸಾಮಾನ್ಯರನ್ನಷ್ಟೇ ಅಲ್ಲದೆ ಪಂಡಿತೋತ್ತಮರನ್ನೂ, ಮುಗ್ಧರನ್ನಾಗಿಯೂ, ಮೂಕವಿಸ್ಮಿತರನ್ನಾಗಿಯೂ, ಧನ್ಯರನ್ನಾಗಿಯೂ ಮಾಡಿದ ಅನೇಕ ಘಟನೆಗಳ ಸ್ಮರಣೆಗಳಿವೆ.
ಮಹಾಗುರುವಿನ ವಿವಿಧ ಮುಖಗಳನ್ನೇ ತಮ್ಮ ಹೃದಯ-ಮನೋ-ಬುದ್ಧಿಗಳಿಗೆ ತುಂಬಿಕೊಳ್ಳುವ ಸಹೃದಯರಿಗೆ ವಿವಿಧ ಕುಸುಮಗಳಿಂದ ಮಾಡಿದ ಮಾಲೆಯಂತೆ ಈ ಗ್ರಂಥವು ಪ್ರಕಾಶಿತವಾಗಿದೆ. ಅವುಗಳಲ್ಲಿ ಕೆಲವು ಕುಸುಮಗಳು ಇವು-----
ಮಹಾಗುರುವಿನ ಪೂರ್ಣತ್ವವು ಹೊರಗೆ ಪ್ರಕಾಶಕ್ಕೆ ಬರದೆ ಸಾಮಾನ್ಯ ಮನುಷ್ಯನಂತೆಯೇ ಜೀವನರಥವನ್ನು ನಡೆಸುತ್ತಾ ಇದ್ದುದು ಇಲ್ಲಿ ಚಿತ್ರಿತವಾಗಿದೆ. ಹೊರಪ್ರಪಂಚವನ್ನು ಪೂರ್ಣವಾಗಿ ಮರೆತು ಆಳವಾಗಿ ಧ್ಯಾನದಲ್ಲಿ ಮುಳುಗಿಬಿಡುವ ಪ್ರವೃತ್ತಿ ಚಿಕ್ಕಂದಿನಲ್ಲೇ ಕರಗತವಾಗಿತ್ತೆಂದು, ಬಾಲ್ಯದ ಒಡನಾಡಿಗಳು ಜ್ಞಾಪಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಗೆಳೆಯರೊಬ್ಬರು "ಮುಳ್ಳಿನ ಮೇಲೆ ಕುಳಿತು ಧ್ಯಾನ ಮಾಡಿದರೆ ನೀನು ನಿಜವಾದ ಯೋಗಿ" ಎಂದು ವಿನೋದಕ್ಕಾಗಿ ಹೇಳಿದ್ದನ್ನು ಮಾಡಿ ತೋರಿಸಿ ಅಚ್ಚರಿಗೊಳಿಸಿದ ಯೋಗಿವರೇಣ್ಯ. ಆತನ ಆತ್ಮಧರ್ಮವನ್ನು ಅದೇ ಮಟ್ಟಕ್ಕೇ ಧರಿಸಿ "ಪತ್ಯುರ್ನೋ ಯಜ್ಞಸಂಯೋಗೇ" ಎಂಬಂತೆ ಜ್ಞಾನಕಾರ್ಯದಲ್ಲಿಯೂ ಸಹಕರಿಸಿ ಬೆಳಗಿಸಬಲ್ಲ ಧರ್ಮಪತ್ನಿ ಶ್ರೀವಿಜಯಾಂಬಿಕಾರವರನ್ನು ಪಡೆದ ಮಹಾನುಭಾವರು ಇವರು. ಈರ್ವರೂ ತಮ್ಮ ಜ್ಞಾನವನ್ನು ಸಂಕ್ರಮಣಮಾಡಿಸುವ ಯೋಗವಿಧಿ "ವೇಧಕವಿದ್ಯೆ"ಯನ್ನು ತಮ್ಮದಾಗಿಸಿಕೊಂಡು ದೈವಪ್ರೇರಣೆಯಂತೆ ಪ್ರಯೋಗಿಸುವ ಕುಶಲಿಗಳು. ಆತ್ಮಕಾಮರಾಗಿ ಅವರ ಬಳಿ ಬಂದವರಲ್ಲಿ ಬಾಲರೂ, ವೃದ್ಧರೂ, ತರುಣರೂ, ಸ್ತ್ರೀಯರೂ, ಪುರುಷರೂ, ವಿದ್ಯಾರ್ಥಿಗಳೂ, ವೈದ್ಯರೂ, ನಾನಾ ಭಾಷೆ ಮತ್ತು ಶಾಸ್ತ್ರಗಳ ವಿದ್ವಾಂಸರೂ, ವಿಜ್ಞಾನಿಗಳೂ, ಕಲಾವಿದರೂ, ಕೃಷಿಕರೂ, ನಾನಾ ವರ್ಣ-ಆಶ್ರಮ-ಮತಧರ್ಮಗಳಿಗೆ ಸೇರಿದವರೂ ದೇಶ-ವಿದೇಶೀಯರೂ ಎಲ್ಲರೂ ಇದ್ದಾರೆ. ಪರಂಜ್ಯೋತಿಯ ಸ್ಥಾನಕ್ಕೆ ಅವರೆಲ್ಲರನ್ನೂ ಕರೆದೊಯ್ಯುವ ಆಶ್ವಾಸನೆಯನ್ನು ಆತ್ಮಬಲದಿಂದ ಕೊಟ್ಟು "ತಾನು ಹೇಳಿದಂತೆ ಮಾಡಿ ತೋರಿಸುವವನು, ಸತ್ಯಪ್ರತಿಜ್ಞನು" ಎಂದು ಅನೇಕರ ಅನುಭವಕ್ಕೂ ತಂದ ಅಸದೃಶಗುರು.
ಆಯುರ್ವೇದ ಯೋಗಶಾಸ್ತ್ರಗಳ ಸಂಗಮಭೂಮಿಯಾದ ನಾಡೀಶಾಸ್ತ್ರವನ್ನು ವಶಕ್ಕೆ ತೆಗೆದುಕೊಂಡು, ಅಧಿಕಾರಿಗಳಾದ ಶಿಷ್ಯರಿಗೂ ಬೋಧಿಸಿದರು. ಸರ್ವಭೂತಹಿತೈಷಿ; ಶರೀರ-ಶಾರೀರ ವಿಜ್ಞಾನಿ;ಧ್ವನಿಮರ್ಮಜ್ಞ, ಶಕುನಜ್ಞ, ಮನೋವಿಜ್ಞಾನಿ, ಶ್ರೇಷ್ಠನಾಯಕ. ಅವನ ಮಹಿಮೆಯನ್ನು ಅವನ ಅನುಗ್ರಹದಿಂದಲೇ ಅರಿಯಲು ಸಾಧ್ಯ--ಎಂಬುದಾಗಿ ಭಕ್ತರು ಕೆಲವರು ಜ್ಞಾಪಿಸಿಕೊಂಡಿದ್ದಾರೆ.
ವಿವಾಹಕ್ಕೆ ಸಾರ್ವಕಾಲಿಕ ಸಂದೇಶ, ಮಕ್ಕಳ ಲಾಲನೆಯಲ್ಲಿ ಭಗವತ್ಸ್ಮರಣೆ, ಹಂಸಮಂತ್ರ ವಿವರಣೆ, ಶೃಂಗೇರಿ ಯಾತ್ರೆಯಲ್ಲಿ ಕೊಟ್ಟ ನೋಟ, ತಪ್ಪುಗಳನ್ನು ನೋವಾಗದಂತೆ ತಿದ್ದುವ ಪರಿ, ದೃಷ್ಟಿದೋಷದಿಂದಾಗುವ ಪರಿಣಾಮ-ಪರಿಹಾರಗಳ ವಿವರಣೆ, ದೇವರ ಹೆಸರುಗಳಿಂದ ನಾಮಕರಣದ ಔಚಿತ್ಯ, ಬಾಳೆಯ ಮರದ ಬಗ್ಗೆ ಕೊಟ್ಟಿರುವ ಸಮಗ್ರನೋಟ, ಮನಃಪುಷ್ಪಗಳನ್ನು ಬಾಡಿಸಬೇಡಿ ಎಂಬಎಚ್ಚರಿಕೆಯ ಮಾತುಗಳು ಸ್ಮರಣೀಯ.ಎಲ್ಲ ರಾಗಗಳಲ್ಲೂ ಪ್ರಣವನಾದವನ್ನು ತರುವ ಸೊಬಗು. ಒಬ್ಬರೇ ಭಕ್ತಶ್ರೋತೃವಾದರೂ ಸತತ ಮೂರು ಗಂಟೆಗಳ ಕಾಲ ಕಾಂಬೋಧಿ ರಾಗದ ಆಲಾಪನೆ ಮಾಡಿದುದು -ಇಂತಹ ಎಲ್ಲ ಸವಿನೆನಪುಗಳನ್ನು ಸವಿಯಲು ಗ್ರಂಥದ ಒಳಹೊಕ್ಕು ನೋಡಬೇಕು.
ಬೆಲೆ: ರೂ. ೧೦೦/- (Hardbound )
ನಮ್ಮ ವೆಬ್ ಸೈಟ್ (https://ayvm.in/publications) ನಲ್ಲಿ ಖರೀದಿಸಿದರೆ ಉಚಿತ ಮನೆಗೆ ವಿತರಣೆ (ವಿಶಾಲ ಭಾರತದಲ್ಲಿ ಮಾತ್ರ).
mob: 8050124365
whatsapp: 7411960041
To know more about Astanga Yoga Vijnana Mandiram (AYVM) and for ordering the books please visit our Website, Facebook and Twitter pages