Tuesday, 8 September 2020

ಪುಸ್ತಕ ಪರಿಚಯ (Book Introduction) - 29


ಗ್ರಂಥ - 29: ಸಂಧ್ಯಾವಂದನೆ (Sandhyavandane)

ಪುಸ್ತಕ ಪರಿಚಯ (Book Introduction) :

ಲೇಖಕರು : ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀ:   
ಸಂಗ್ರಹ : ಶ್ರೀ  ಪ್ರಮೋದ್.ಎಸ್.ರಾಘವನ್ 
ಪ್ರಕಾಶಕರು : ಅಷ್ಟಾಂಗಯೋಗ ವಿಜ್ಞಾನ ಮಂದಿರ, ಬೆಂಗಳೂರು

ಮಹರ್ಷಿಪ್ರಣೀತವಾದ ಸಂಸ್ಕಾರಗಳಲ್ಲಿ ಪ್ರಮುಖವಾದ ಉಪನಯನ ಸಂಸ್ಕಾರವನ್ನು ಒಳಗೊಂಡು ಉಪನೀತರಾದವರು ಅಗತ್ಯವಾಗಿ ಆಚರಿಸಲೇಬೇಕಾದ ನಿತ್ಯಕರ್ಮ 'ಸಂಧ್ಯಾವಂದನೆ'. ಕಾಲದ ಒತ್ತಡ ಅಥವಾ ವೇಗದಿಂದ ಸಂಧ್ಯಾವಂದನೆಯು ಅನೇಕರಲ್ಲಿ ಬಿಟ್ಟೇ ಹೋಗಿರುವುದುಂಟು. ಅದಕ್ಕೆ ಅನೇಕಾನೇಕ ಕಾರಣಗಳಿದ್ದರೂ ಮುಖ್ಯವಾಗಿ ಆ ಕರ್ಮದ ಬಗ್ಗೆ ಅನಾಸಕ್ತಿ / ನಿರುತ್ಸಾಹ ಕಾಣುತ್ತದೆ. ಏನೋ ಮಾಡಬೇಕು, ಮಾಡದೆ ಇದ್ದರೆ ಏನಾದರೂ ತೊಂದರೆ ಆಗಿಬಿಡುತ್ತದೆ ಎನ್ನುವ ಹೆದರಿಕೆಯಿಂದ ಸಂಧ್ಯಾವಂದನೆ ಮಾಡುವುದನ್ನು ನೋಡುತ್ತಿದ್ದೇವೆ.
 
ಸಂಧ್ಯಾವಂದನೆಯನ್ನು ಯಾವ ಸುಖಕ್ಕಾಗಿ, ಯಾವ ಆನಂದಕ್ಕಾಗಿ ಜ್ಞಾನಿಗಳು ತಂದುಕೊಟ್ಟರೋ ಆ ಭಾವನೆಯು ಕಡಿಮೆ ಆಗಿರುವುದನ್ನು ಎಲ್ಲಾ ಕಡೆಯಲ್ಲೂ ನೋಡುತ್ತಿದ್ದೇವೆ.
 
ಶ್ರೀರಂಗಮಹಾಗುರುಗಳು 'ಸಂಧ್ಯಾವಂದನೆಯು ಒಂದು ಮಹಾಯೋಗ, ಅದು ಹೊರಗಿನ ಒಂದು ಕರ್ಮ ಅಲ್ಲ, ಒಳಗಿನ ಒಂದು ಮರ್ಮ' ಎಂದು ಹೇಳುತ್ತಿದ್ದರು. ಈ ಸೂತ್ರ ಪ್ರಾಯವಾದ ಮಾತನ್ನು ಹಿನ್ನೆಲೆಯಾಗಿಟ್ಟುಕೊಂಡು ಒಳಗಡೆಯ ಭಾವಕ್ಕೆ ಅನುಗುಣವಾಗಿ ಸಂಧ್ಯಾವಂದನೆಯನ್ನು ಅಳವಡಿಸಿಕೊಳ್ಳಬೇಕು. ಇದನ್ನು ಏತಕ್ಕೆ ಆಚರಿಸಬೇಕೆಂದರೆ ಕಾಲವನ್ನು ದಾಟುವುದಕ್ಕೋಸ್ಕರವಾಗಿ. ಇವು ಕಾಲ ಶರೀರದಲ್ಲಿ ಪರಮಾತ್ಮನು ಇಟ್ಟಿರುವ, ಕಾಲನ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗುವ ಕೆಲವು ಕಿಂಡಿಗಳಂತೆ - Emergency exit. ಇದನ್ನು ಬಿಡಬಾರದು, ಉಪಯೋಗಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಪೂಜ್ಯ ಶ್ರೀ ರಂಗಪ್ರಿಯ ಸ್ವಾಮಿಗಳು ಈ ಕೈಪಿಡಿಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.
 
ಈ ಕೈಪಿಡಿಯಲ್ಲಿ, ಸಂಧ್ಯಾವಂದನೆಯಲ್ಲಿನ, 'ಸಂಧ್ಯಾ' ಮತ್ತು 'ವಂದನೆ' ಎಂಬ ಎರಡು ಪದಗಳ ಶಬ್ದಾರ್ಥ ಮತ್ತು ಅದರ ಪ್ರಯೋಜನದ ವಿವರವನ್ನು ಕೊಡಲಾಗಿದೆ.  ಸಂಧ್ಯೆಯು ಹೊರಗಡೆಯಲ್ಲಿ ಕಾಲರೂಪವಾಗಿ ಕಂಡರೂ ಕೂಡ, ಅದು ಕಾಲದ ಹಿಂದಿರುವ, ಕಾಲಕ್ಕೆ ಅಭಿಮಾನಿಯಾಗಿ ಇರುವ ದೇವತೆ.
 
ನಂತರ ಸಂಧ್ಯಾವಂದನೆಗೆ ಅಧಿಕಾರಿ, ಆಚರಣೆಯ ಕಾಲ, ಸಂಧ್ಯಾವಂದನೆಗೆ ಸಿದ್ಧತೆ ಇವುಗಳ ಒಂದು ಸ್ಥೂಲ ಪರಿಚಯವನ್ನು ಕೊಡಲಾಗಿದೆ. ಸಂಧ್ಯಾವಂದನೆಯ ಮೂಲಭೂತ ಅಂಗಗಳಾದ ಆಚಮನ, ಪ್ರಾಣಾಯಾಮ, ಮಾರ್ಜನ, ಅರ್ಘ್ಯಪ್ರದಾನ, ಗಾಯತ್ರೀಜಪ ಹಾಗೂ ಸೂರ್ಯೋಪಸ್ಥಾನ ಅವುಗಳ ಸ್ಥೂಲ ಪರಿಚಯ ಹಾಗೂ ಏಕೆ, ಹೇಗೆ ಎಂಬ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಲಾಗಿದೆ.
 
ಈ ಕರ್ಮದಲ್ಲಿನ ವಿಸ್ತೃತರೂಪವನ್ನು ನೀಡುವುದಕ್ಕಿಂತಲೂ ಕರ್ಮದ ಹಿಂದೆ ಅಡಗಿರುವ ಮರ್ಮವನ್ನು ಬಿತ್ತರಿಸುವಲ್ಲಿ ಹೆಚ್ಚು ಒತ್ತನ್ನು ಕೊಡಲಾಗಿದೆ. ಒಟ್ಟಿನಲ್ಲಿ, ಇಂತಹ ಅತ್ತ್ಯುತ್ತಮವಾದ ವಿಷಯಗಳ ಒಳಮರ್ಮವನ್ನು ಅತಿಸುಲಭವಾಗಿ ಪಾಮರರಿಗೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ ಈ ಕಿರುಹೊತ್ತಿಗೆ;  ಇದನ್ನು ಓದುವವರಿಗೆ ಸಂಧ್ಯೋಪಾಸನೆಯ ಆಚರಣೆಗೆ ಬೇಕಾದ ವಿಶೇಷಸ್ಫೂರ್ತಿಯನ್ನು ನೀಡುತ್ತದೆ.

ಬೆಲೆ: ರೂ. ೨೫೦/- (Hardbound )   
ನಮ್ಮ ವೆಬ್ ಸೈಟ್ (https://ayvm.in/publications) ನಲ್ಲಿ ಖರೀದಿಸಿದರೆ ಉಚಿತ ಮನೆಗೆ ವಿತರಣೆ (ವಿಶಾಲ ಭಾರತದಲ್ಲಿ ಮಾತ್ರ). 
mob: 8050124365
whatsapp: 7411960041


To know more about Astanga Yoga Vijnana Mandiram (AYVM) and for ordering the books please visit our Website, Facebook and Twitter pages

More about AYVM

To know more about Astanga Yoga Vijnana Mandiram (AYVM) and for ordering the books please visit our Official Website, Facebook and Twitter pages: